ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 5, 2011

13

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು

‍ನಿಲುಮೆ ಮೂಲಕ

ಡಾ. ರಾಜಾರಾಮ ಹೆಗಡೆ

ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ  ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು  ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಪ್ಪೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.

ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ  ಅದೊಂದು ಅಪಾಯಕಾರಿ ಗ್ರಂಥವಾಗಿದೆ.  ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ.

ಈ ನಡುವೆ ಶಾಲಾ ಮಕ್ಕಳಿಗೆ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಹುಟ್ಟುಹಾಕಿ  ತಮ್ಮ ಶ್ರಮ ಹಾಗೂ ಮಠದ ಹಣವನ್ನು ವೆಚ್ಚಮಾಡುತ್ತಿರುವ ಸ್ವರ್ಣವಲ್ಲೀ ಸ್ವಾಮಿಗಳು ತಮ್ಮ ಕೆಲಸವೇಕೆ ಮಹತ್ವಪೂರ್ಣವಾಗಿದೆ ಎಂಬುದನ್ನು ಬೇರೆಯೇ ರೀತಿಯಲ್ಲಿ ಭಾವಿಸಿದಂತಿದೆ. ಅವರು ತಿಳಿಸುವಂತೆ ಭಗವದ್ಗೀತೆಯು ಮಕ್ಕಳಿಗೆ ಆಧ್ಯಾತ್ಮ ಶಿಕ್ಷಣವನ್ನು ನೀಡುತ್ತದೆಯೇ ಹೊರತೂ ಯಾವುದೇ ಮತಪ್ರಚಾರವನ್ನು ಮಾಡುತ್ತಿಲ್ಲ. ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಪ್ರಚೋದಿಸಿ, ಅವರಿಗೆ ಮನೋಸ್ಥೈರ್ಯವನ್ನು ಸತ್ಪ್ರೇರಣೆಯನ್ನು ನೀಡುವ ಶಕ್ತಿ ಭಗವದ್ಗೀತೆಗಿದೆ. ಒಂದೊಮ್ಮೆ ಅದು ಹಿಂದೂ ಸಂಸ್ಕೃತಿಯ ಉದ್ಧಾರಕ್ಕೆ ಸಹಕರಿಸುತ್ತದೆ ಎಂಬುದಾಗಿ ಅವರು ನಂಬಿಕೊಂಡಿದ್ದರೂ ಕೂಡ ಅವರು ಸಾಂಪ್ರದಾಯಿಕ ಅರ್ಥದಲ್ಲಿ ಹೇಳುತ್ತಿದ್ದಾರೆಯೇ ಹೊರತೂ ಆಧುನಿಕ ಪರಿಭಾಷೆಯಲ್ಲಿ ಮಾತನಾಡುತ್ತಿಲ್ಲ. ನಮಗೆ ತಿಳಿದುಬರುವುದೇನೆಂದರೆ ಅವರ ಕಾರ್ಯಕ್ರಮದಲ್ಲಿ  ಎಲ್ಲಾ ಹಿನ್ನೆಲೆಯ ಮಕ್ಕಳೂ ಭಾಗವಹಿಸಿದ್ದಾರೆ ಹಾಗೂ ಅವರಾಗಲೀ ಅವರ ಪಾಲಕರಾಗಲೀ ಈ ಕಾರ್ಯಕ್ರಮದ ಕುರಿತು  ವಿರೋಧವನ್ನು ವ್ಯಕ್ತಪಡಿಸಿಲ್ಲ.

ಭಗವದ್ಗೀತಾ ಅಭಿಯಾನವನ್ನು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕ್ರಮವನ್ನಾಗಿ ಗುರುತಿಸಿರುವುದರಿಂದ ಭಗವದ್ಗೀತೆಯ ಕುರಿತು ಈ ಚರ್ಚೆಗಳು ಹಾಗೂ ವಿರೋಧಗಳು ಸ್ಫೋಟವಾಗಿವೆ ಎಂಬುದು ಸ್ಪಷ್ಟ. ಏಕೆಂದರೆ ಇಂಥ ಅಭಿಯಾನಗಳಿಲ್ಲದೇ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಭಗವದ್ಗೀತೆಯ ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿದೆ. ಹಿಂದೂಧರ್ಮದ ಧರ್ಮಗ್ರಂಥ ಯಾವುದು ಎಂಬ ಕುರಿತು ಹಿಂದೂಗಳಿಗೇ ಸ್ಪಷ್ಟತೆಯಿಲ್ಲದಿರುವಾಗ ಭಗವದ್ಗೀತೆಯನ್ನು ಅನ್ಯಧರ್ಮೀಯರು ಭಯದಿಂದ ನೋಡುತ್ತಾರೆ ಅಂತೇನೂ ಅನಿಸುವುದಿಲ್ಲ. ಮತ್ತೆ, ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡ ರಾಷ್ಟ್ರೀಯಯುಗದ ಚಿಂತಕರು ಅದನ್ನು ಧರ್ಮಗ್ರಂಥವೆಂಬುದಾಗಿ ನಂಬಿದರೂ ಕೂಡ ಭಗವದ್ಗೀತೆಯ ಸ್ವರೂಪ ಹಾಗೂ ವಿಷಯಗಳೂ ಬೈಬಲ್ ಹಾಗೂ ಖುರಾನ್ ಗಳಂತಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಭಗವದ್ಗೀತೆಯು ಅನ್ಯಧರ್ಮೀಯರಲ್ಲಿ ವೈರತ್ವವನ್ನು ಹುಟ್ಟಿಸುವ ಗ್ರಂಥವಾಗಿ ಪರಿಣಮಿಸಿಲ್ಲ. ಹಿಂದೂಗಳೆನ್ನುವವರೂ ಕೂಡ ಧರ್ಮಗ್ರಂಥ ಎಂಬ ಪರಿಭಾಷೆಯನ್ನು ಸ್ಕ್ರಿಪ್ಚರ್ (Scripture) ಎಂಬ ಕಲ್ಪನೆಗಿಂತ ಬೇರೆಯದೇ ಆದ ರೀತಿಯಲ್ಲಿ ಬಳಸುತ್ತಾರೆ. ಅವರ ಪ್ರಕಾರ ಈ ಧರ್ಮಗ್ರಂಥಗಳು ಆಧ್ಯಾತ್ಮ/ಮೋಕ್ಷ ಸಾಧನೆಯನ್ನು ಮಾಡುವ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗವನ್ನು ತಿಳಿಸುತ್ತವೆ. ಹಿಂದೂ ಚಿಂತಕರು ಬೈಬಲ್ ಹಾಗೂ ಖುರಾನನ್ನೂ ಕೂಡ ಇಂಥದ್ದೇ ಮತ್ತೆರಡು ಗ್ರಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಎಲ್ಲಾ ಧರ್ಮಗ್ರಂಥಗಳಲ್ಲೂ ಅನುಸರಿಸುವಂಥ ತತ್ವಗಳು ಇವೆ ಎನ್ನುತ್ತಾರೆ. ಹಾಗಾಗಿ ಧರ್ಮಗ್ರಂಥಗಳ ಓದುವಿಕೆಗೆ ಭಾರತದಲ್ಲಿ ಬೇರೆಯದೇ ಒಂದು ಮಹತ್ವವು ಪ್ರಾಪ್ತವಾಗಿ ಅದೊಂದು ಸಂಘರ್ಷಾತ್ಮಕ ವಿಷಯವಾಗಿಲ್ಲ.

ಈ ಮೇಲಿನ ಸಂಗತಿಯನ್ನು ಗಮನಿಸಿದರೆ ಭಗವದ್ಗೀತೆಯನ್ನು ಒಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಪ್ರತಿಪಾದಿಸಿದಾಗ ಸೆಕ್ಯುಲರ್ ಚೌಕಟ್ಟಿನ ಹಂತದಲ್ಲಿ ಅದು ಸಮಸ್ಯೆಗಳನ್ನು  ಹುಟ್ಟುಹಾಕುತ್ತದೆಯೇ ವಿನಃ ಜನರಿಗೆ ಇಂದೂ ಅದೊಂದು ಸಮಸ್ಯೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸೆಕ್ಯುಲರ್ ತತ್ವದ ಪ್ರಕಾರ  ರಿಲಿಜಿಯಸ್ ಸ್ಕ್ರಿಪ್ಚರ್ಅನ್ನು ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದೇ ವೇಳೆಗೆ ಅನ್ಯ ರಿಲಿಜನ್ನುಗಳ ಸತ್ಯವನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮನಾಗುತ್ತದೆ. ಹಾಗಾಗಿ ಒಂದು ರಿಲಿಜಿಯಸ್ ಸ್ಕ್ರಿಪ್ಚರ್ಅನ್ನು ಸೆಕ್ಯುಲರ್ ಸರಕಾರಿ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ದೇಶೀ ರಿಲಿಜನ್ನುಗಳೇ ಇಲ್ಲ. ಹಾಗಾಗಿ ಇಲ್ಲಿ ರಿಲಿಜಿಯಸ್ ಸ್ಕ್ರಿಪ್ಚರ್ಗಳೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗೂ ಈ ಮೇಲಿನ ಸೆಕ್ಯುಲರ್ ಸಮಸ್ಯೆಗಳೂ ಕೂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಾಮಾನ್ಯರಲ್ಲಿ ಬಾಹ್ಯ ಪ್ರಚೋದನೆಯಿಲ್ಲದೇ ಏಳುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದೊಂದು ರಿಲಿಜನ್ನು ಹಾಗೂ ಭಗವದ್ಗೀತೆಯ ಕಲಿಕೆಯು ಒಂದು ಸೆಕ್ಯುಲರ್ ಸಮಸ್ಯೆಯೆಂಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಕೆಲವೊಂದು ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ.  ಹಾಗಾಗಿ ಅದನ್ನೊಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಭಾವಿಸಿ ಪ್ರತಿಪಾದಿಸುವವರೇ ಭಗವದ್ಗೀತೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದ್ದಾರೆ ಹಾಗೂ ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದೇ ಅನ್ನಬೇಕು: ಅದರಲ್ಲಿ ಹಿಂದುತ್ವವಾದಿಗಳು ಹಾಗೂ ಸೆಕ್ಯುಲರ್ವಾದಿಗಳಿಬ್ಬರೂ ಇದ್ದಾರೆ.

ಈ ಇಲ್ಲದ ಸಮಸ್ಯೆಗೆ ಇನ್ನೂ ಕೆಲವು ಸಲ್ಲದ ಸಮಸ್ಯೆಗಳನ್ನು ಈಚೆಗೆ ಪೇರಿಸಲಾಗಿದೆ. ಅದೆಂದರೆ ಭಗವದ್ಗೀತೆಯು ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬ ವಿಚಾರ. ಭಗವದ್ಗೀತೆಗೆ ಈ  ಹೊಸ ಪಟ್ಟವನ್ನು ಕಟ್ಟಿ  ಬಹಳ ಕಾಲ ಸಂದಿಲ್ಲ. ರಾಷ್ಟ್ರೀಯತಾ ಹೋರಾಟದ ಯುಗದಲ್ಲಿ ಮನುಸ್ಮೃತಿಗೆ ಈ ಪಟ್ಟವನ್ನು ನೀಡಲಾಗಿತ್ತು ಹಾಗೂ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ತೆಗೆದುಕೊಳ್ಳಲಾಗಿತ್ತು. ಏಕೆಂದರೆ ಭಗವದ್ಗೀತೆಯು ವಯುಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಾಂಸಾರಿಕರು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥಪೂರ್ಣವಾಗಿತ್ತು. ಹನ್ನೆರಡನೆಯ ಶತಮಾನದ ನಂತರ ಭಾರತದಲ್ಲಿ ಜನಪ್ರಿಯಗೊಂಡ ವೈಷ್ಣವ ಭಕ್ತಿಮಾರ್ಗವು ಈ ಗ್ರಂಥಕ್ಕೆ ಆದ್ಯ ಸ್ಥಾನವನ್ನು ನೀಡಿತ್ತು. (ಈ ಸಂಪ್ರದಾಯಗಳನ್ನು ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳುವಳಿಗಳೆಂಬುದಾಗಿಯೂ ಗುರುತಿಸಲಾಗಿದೆ.) ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಗ್ರಂಥವು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯವು ಗಟ್ಟಿಯಾಗಿದ್ದಂತೆ ತೋರುತ್ತದೆ. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಗಾಂಧಿಯವರು ತಮ್ಮ ಆಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಫೂರ್ತಿಯನ್ನು ಪಡೆದರು ಹಾಗೂ ಅವರ ರಾಜಕೀಯದಲ್ಲಿ ಭಗವದ್ಗೀತೆಯೂ ಚರಕದಂತೆ ಮಾನ್ಯತೆ ಪಡೆಯಿತೇ ವಿನಃ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ.  ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಕುವೆಂಪು ಅವರೂ ಕೂಡ ಭಗವದ್ಗೀತೆಯನ್ನು  ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಭಗವದ್ಗೀತೆಯ ಕುರಿತು ಚರ್ಚೆಗಳು ಏನೇ ಇದ್ದರೂ, ಅದು ಜಾತಿಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ.

ಭಗವದ್ಗೀತೆಯು ಜಾತಿ ಶೋಷಣೆಯನ್ನು ಪ್ರತಿಪಾದಿಸುತ್ತದೆ ಎಂಬ ವಾದವು ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎಂಬ ಕಾರಣದಿಂದ ದಲಿತ ಹಾಗೂ ಪ್ರಗತಿಪರ ಚಿಂತಕರಲ್ಲಿ ಹುಟ್ಟಿದ ತಾರ್ಕಿಕ ನಿರ್ಣಯವಿರಬಹುದು. ಸಂಸ್ಕೃತವು ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಮಾನ್ಯಮಾಡುತ್ತದೆಯಾದ್ದರಿಂದ ಸಂಸ್ಕೃತ ಭಾಷೆಯಲ್ಲಿರುವ ಈ ಧರ್ಮಗ್ರಂಥವು ಜಾತಿಶೋಷಣೆಯನ್ನು ಬೋಧಿಸಲೇಬೇಕು. ಈ ವಾದಕ್ಕೆ ಮತ್ತೂ ಒಂದು ಮೂಲವಿದ್ದಂತೆ ತೋರುತ್ತದೆ. ಅದೆಂದರೆ 60ರ ದಶಕದಲ್ಲಿ ಡಿ.ಡಿ. ಕೊಸಾಂಬಿಯವರು ಭಗವದ್ಗೀತೆಯ ಸಂದರ್ಭದಲ್ಲಿ ಭಕ್ತಿಯ ಫ್ಯೂಡಲ್ ಮೌಲ್ಯದ ಕುರಿತು ಇಟ್ಟ ವಿಚಾರಗಳು. ಈ ವಿಚಾರಗಳನ್ನು ಕೊಸಾಂಬಿಯವರು ಮತ್ತೂ ಬೆಳೆಸಲಿಲ್ಲ, ಆದರೆ ಭಾರತೀಯ ಎಡಪಂಥೀಯ ಚಿಂತಕರು ಇದನ್ನೊಂದು ವಿಶ್ಲೇಷಣಾ ಮಾದರಿಯನ್ನಾಗಿ ಸ್ವೀಕರಿಸಿ ಸರಳೀಕರಿಸುತ್ತ ಸಾಗಿದರು. ಭಾರತದಲ್ಲಿ ಜಾತಿವ್ಯವಸ್ಥೆಯು ಗಟ್ಟಿಗೊಂಡು ಶೋಷಣಾತ್ಮಕವಾಗಿ ಬೆಳೆದ ಯುಗವನ್ನು ಫ್ಯೂಡಲ್ ಯುಗವೆಂಬುದಾಗಿ ನಂಬಿದ ಎಡಪಂಥೀಯರಿಗೆ ಆ ಯುಗದ ಐಡಿಯಾಲಜಿಯಾದ ಭಕ್ತಿಯನ್ನು ಪ್ರತಿಪಾದಿಸುವ ಗ್ರಂಥವಾಗಿ ಭಗವದ್ಗೀತೆಯು ಕಂಡುಬಂದಿತು. ಇವೆಲ್ಲ ಭಾರತೀಯ ಸಮಾಜವನ್ನು ನಾವು ಗ್ರಹಿಸಲು ಬಳಸುತ್ತಿರುವ ವಿವಿಧ ಸರಳೀಕರಣಗಳು ಅಷ್ಟೆ. ಹಾಗಾಗಿ ಸಧ್ಯಕ್ಕೆ ಇವೆಲ್ಲ ಊಹಾತ್ಮಕ ಪ್ರತಿಪಾದನೆಗಳಾಗಿಯೇ ಉಳಿದಿವೆಯೇ ವಿನಃ ವೈಜ್ಞಾನಿಕ ನಿರ್ಣಯಗಳಾಗಿಲ್ಲ್ಲ.

ಇನ್ನು ದಿನೇಶ್ ಅಮೀನ್ಮಟ್ಟು ಅವರು ದಿನಾಂಕ 18-7-2011ರ ಪ್ರಜಾವಾಣಿಯಲ್ಲಿ ಈ ಮೇಲಿನ ಕಥೆಗಳಿಗೆ ಮತ್ತೊಂದು ಉಪಕಥೆಯನ್ನು ಸೇರಿಸಿದ್ದಾರೆ. ಅದು ಆರ್ಯ-ದ್ರಾವಿಡರದು. ಆರ್ಯ-ದ್ರಾವಿಡರದು ಆಧುನಿಕ ಕಥೆ. ಈ  ಆಧುನಿಕ ಕಥೆಯನ್ನು ಇತಿಹಾಸವೆಂಬುದಾಗಿ ಭಾವಿಸಿಕೊಂಡು ರಾಷ್ಟ್ರೀಯತಾ ಯುಗದ ಅನೇಕ ಮುಂದಾಳುಗಳು ತಮ್ಮ ಸಮಾಜಿಕ ಹೋರಾಟಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಇತಿಹಾಸದ ಹೆಸರಿನಲ್ಲಿ ಕಲ್ಪಿತ ಜನಾಂಗಗಳನ್ನು ಹುಟ್ಟುಹಾಕಿ ನ್ಯಾಯದ ಹೆಸರಿನಲ್ಲಿ ಜಾತಿದ್ವೇಷ-ಪ್ರತೀಕಾರಗಳನ್ನು ಬಡಿದೆಬ್ಬಿಸಿದ ಈ ಕಥೆಯು ತಾನು ಪುರಾಣಗಳಂತೆ ನಿರಪಾಯಕಾರಿಯಲ್ಲ ಎಂಬುದನ್ನು ನಿರ್ದೇಶಿಸಿದೆ. ಆದರೆ ಇಂದು ಗಂಭೀರ ಇತಿಹಾಸಕಾರನೆಂದುಕೊಳ್ಳುವ ಯಾವ ವ್ಯಕ್ತಿಯೂ ಕೂಡ ಇದೊಂದು ಐತಿಹಾಸಿಕ ಸಂಗತಿ ಎಂಬುದಾಗಿ ನಂಬುವುದಿಲ್ಲ. ಇತಿಹಾಸಕಾರರು ಈಗಾಗಲೇ ಕಸದಬುಟ್ಟಿಗೆಸೆದಿರುವ ಈ ಚರ್ಚೆಯನ್ನು ದಿನೇಶ್ ಅಮೀನ್ಮಟ್ಟು ಅವರಿನ್ನೂ ಇತಿಹಾಸ ಎಂಬುದಾಗಿ ನಂಬಿಕೊಂಡಿರುವುದೇ ಆಶ್ಚರ್ಯ.

ಒಟ್ಟಾರೆಯಾಗಿ ನೋಡಿದಾಗ ಭಗವದ್ಗೀತೆಯ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಇಂದಿನ ಚರ್ಚೆಗಳೆಲ್ಲವೂ ಹುಟ್ಟುವುದು 1) ಅದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬ ಪೂರ್ವಗೃಹೀತದಿಂದ ಹಾಗೂ 2) ಅದು ಜಾತಿ/ಜನಾಂಗ ಸಂಘರ್ಷದ ಇತಿಹಾಸವನ್ನು ದಾಖಲಿಸುತ್ತದೆ ಎಂಬ ನಂಬಿಕೆಯಿಂದ. ಇಂಥ ಚರ್ಚೆಗಳನ್ನು ಎತ್ತುತ್ತಿರುವ ಉದ್ದೇಶ ಒಳ್ಳೆಯದೇ ಅಂದುಕೊಂಡಿದ್ದಾರೆ; ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು ಎಂಬುದಾಗಿ ಪರ ಪಕ್ಷದವರು ನಂಬಿಕೊಂಡರೆ   ಕೋಮು  ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತೆ ತಲೆಯೆತ್ತುತ್ತಿದೆ, ಅದನ್ನು ತಪ್ಪಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ನಂಬಿಕೊಂಡಿವೆ. ನಮ್ಮ ಇತಿಹಾಸ ಪುರಾಣಗಳನ್ನು ಹಿಡಿದುಕೊಂಡು ನಮ್ಮ ವರ್ತಮಾನದ ಪ್ರಸ್ತುತತೆಗೆ ಬೇಕಾದಂತೆ ಅದನ್ನು ನಿರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯಗಳು ಯಾವಾಗಲೂ ತೆರೆದಿಟ್ಟಿವೆ. ಹಾಗೂ ಇದನ್ನೇ ಭಾರತೀಯರ ಒಂದು ದೊಡ್ಡ ದೋಷ ಹಾಗೂ ಅನಾಗರಿಕತೆಯ ಲಕ್ಷಣ ಎಂಬುದಾಗಿಯೂ ಪಾಶ್ಚಾತ್ಯರು ಪರಿಗಣಿಸಿದ್ದರು. ಹಾಗಾಗಿ ಈ ಮೇಲಿನ ನಿರೂಪಣೆ ನಡೆಸಿದವರೆಲ್ಲ ಆಧುನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಬಹುದೇ ಹೊರತೂ ಸಂಪ್ರದಾಯದ ದೃಷ್ಟಿಯಲ್ಲಿ ಅಪರಾಧಿಗಳಂತೂ ಆಗಲಾರದು.

ಸ್ವರ್ಣವಲ್ಲಿ ಶ್ರೀಗಳು ಅಮೀನ್ಮಟ್ಟು ಅವರ ಹೊಸ ನಿರೂಪಣೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡುವುದಕ್ಕೂ ಮೊದಲು  ಈ ಮೇಲಿನ ನಿರೂಪಣೆಗಳಿಗೂ ಸಾಂಪ್ರದಾಯಿಕ ನಿರೂಪಣೆಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಈ ಹೊಸ ನಿರೂಪಣೆಗಳು ಜನಾಂಗ ದ್ವೇಷ ಹಾಗೂ ಸಂಘರ್ಷಗಳನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಹಾಗಾಗಿ ಬಹು ಸಂಸ್ಕೃತಿಗಳನ್ನು ಸಾಮರಸ್ಯದಿಂದ ಪಾಲಿಸಬೇಕೆನ್ನುವ ಉದ್ದೇಶವನ್ನೊಳಗೊಂಡ ನಮ್ಮ ಸೆಕ್ಯುಲರ್ ರಾಷ್ಟ್ರದ ಆಶಯಕ್ಕೆ    ಭಗವದ್ಗೀತಾ ಅಭಿಯಾನಕ್ಕಿಂತ ಇಂಥ ನಿರೂಪಣೆಗಳೇ  ಹೆಚ್ಚು ಧಕ್ಕೆ ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇತಿಹಾಸದ ಹೆಸರಿನಲ್ಲಿ ಬಂದ ಈ ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಗವದ್ಗೀತೆಗೆ ಹೊಸ ವಿಷದ ಹಲ್ಲುಗಳನ್ನು ಸೇರಿಸುತ್ತೇವೆಯೇ ಹೊರತೂ ನಮ್ಮ ಯಾವ ಸಾಮಾಜಿಕ ನ್ಯಾಯಕ್ಕೂ ಈ ನಿರೂಪಣೆ ಒದಗಿ ಬರುವುದಿಲ್ಲ. ಹಾಗಾಗಿ ಏನೋ ಅನಾಹುತವಾಗುತ್ತಿದೆ ಅದನ್ನು ತಪ್ಪಿಸಬೇಕೆಂದು ಇಂಥ ಹೊಸಹೊಸ ಇತಿಹಾಸಗಳನ್ನು ಕಟ್ಟಿ  ಅವುಗಳನ್ನು ನಮ್ಮ ಮಠಾಧಿಪತಿಗಳು ಪ್ರಚಾರಮಾಡುವಾಗ ಆಗುವ ಅನಾಹುತಕ್ಕಿಂತ  ಭಗವದ್ಗೀತೆಯ ಅಭಿಯಾನವನ್ನು ಈಗಿದ್ದ ಹಾಗೇ ನಡೆಯಲಿಕ್ಕೆ ಬಿಡುವುದೇ ನಮ್ಮ ಸಾಮಾಜಿಕ ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಹೆಚ್ಚು ಕ್ಷೇಮಕರ. ಹೆಚ್ಚೆಂದರೆ ಬಹಳಷ್ಟು ಮಂದಿಗೆ ಅದು ಅರ್ಥವಾಗುವುದಿಲ್ಲ ಅಷ್ಟೆ. ಅನರ್ಥ ಹುಟ್ಟಿಸುವುದಕ್ಕಿಂತ ಅದೇ ಎಷ್ಟಕ್ಕೋ ಒಳ್ಳೆಯದು. ಭಗವದ್ಗೀತೆಯನ್ನು ನೂರು ವರ್ಷ ಕಡ್ಡಾಯಮಾಡಿದರೂ ಅದು ಭಾರತದಲ್ಲಿ ಒಂದು ರಿಲಿಜನ್ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರ ಹಾಗೂ ವಿರೋಧದ ಗುಂಪುಗಳೆರಡೂ ಗಮನದಲ್ಲಿಟ್ಟುಕೊಂಡರೆ ಈಗಿರುವ ಸಮಸ್ಯೆಯನ್ನು ಬಗೆಹರಿಸುವ ದಾರಿ ಕಾಣಬಹುದು.

ಭಗವದ್ಗೀತೆಯ ಕುರಿತ ಯಾವ ಸಂಪ್ರದಾಯಸ್ಥರ ನಿರೂಪಣೆಗಳೂ ವರ್ತಮಾನದ ಸಮೂಹಗಳನ್ನು ರಿಲಿಜನ್, ಜನಾಂಗ, ಜಾತಿಗಳ ನೆಲೆಯಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡಿಲ್ಲ ಎಂಬುದನ್ನು ಗಮನಿಸೋಣ. ವಿಭಿನ್ನ ಸಂಪ್ರದಾಯಗಳು ಸತ್ಯವನ್ನು ಅರಿಯಲಿಕ್ಕಿರುವ ವಿಭಿನ್ನ ಮಾರ್ಗಗಳು ಎಂಬುದನ್ನು ಭಗವದ್ಗೀತೆಯೇ ಸಾರುತ್ತದೆ. ನಮ್ಮ ಈ ಆರ್ಯ-ದ್ರಾವಿಡ, ಬ್ರಾಹ್ಮಣ-ಶೂದ್ರ ಕಥೆಗಳೆಲ್ಲವನ್ನು ನಿರಾಧಾರವಾಗಿ ಅದರ ಮೇಲೆ ಹೇರುವುದಕ್ಕಿಂತ ಈ ಮೇಲಿನ ಐತಿಹಾಸಿಕ ಸಂಗತಿ ನಮ್ಮ ಗಮನವನ್ನು ಮೊದಲು ಸೆಳೆಯಬೇಕು.  ಭಗವದ್ಗೀತೆಯಲ್ಲಿ ನಮ್ಮ ಪೂರ್ವಿಕರು, ಸಂತರು, ದಾರ್ಶನಿಕರೆಲ್ಲ ಸಾವಿರಾರು ವರ್ಷ ಏನನ್ನು ಹುಡುಕಿದ್ದಾರೆ? ಅದೇಕೆ ಇಂದಿನವರೆಗೂ  ಯಾವ ಅಧಿಕಾರ, ಬಲಗಳ ಸಹಾಯವಿಲ್ಲದೇ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ? ಎಂಬ  ಪ್ರಶ್ನೆ ನನಗಂತೂ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹಾಗಾಗಿ ಈ ಗ್ರಂಥದ ಕುರಿತು ಉಡಾಫೆಯಿಂದ ಪ್ರತಿಕ್ರಿಯಿಸಿದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದಲಾಗಿ ಅದನ್ನು ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಸಾಧನೆ ಮಾಡಿದವರ ಜೊತೆಗೆ ಸಂವಾದ ಬೆಳೆಸೋಣ.

ಭಗವದ್ಗೀತೆಯಂಥ ಗ್ರಂಥಗಳ ಕುರಿತು ಇಂದು ಇರುವ ಮೇಲಿನ ಚರ್ಚೆಗಳು, ಹೋರಾಟಗಳು ಏನನ್ನು ದೃಷ್ಟಾಂತಪಡಿಸುತ್ತವೆ? ನಮ್ಮ ಸಂಸ್ಕತಿಯಲ್ಲಿ ಅದರ ಸ್ಥಾನಮಾನವೇನು ಹಾಗೂ ಅದರ ಜೊತೆಗೆ ವ್ಯಕ್ತಿಯೊಬ್ಬನು ಯಾವ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕೆಂಬುದೇ ನಮಗೆ ಮರೆತುಹೋಗಿದೆ. ಬದಲಾಗಿ ಅದನ್ನೊಂದು ಹಿಂದೂ ರಿಲಿಜಿಯಸ್ ಸ್ಕ್ರಿಪ್ಚರ್ಎಂದೋ ಅಥವಾ ಆರ್ಯ-ಬ್ರಾಹ್ಮಣರ ಮ್ಯಾನಿಫೆಸ್ಟೋ ಅಥವಾ ಇತಿಹಾಸ ಎಂದೋ ಭಾವಿಸಿಕೊಳ್ಳುವುದು ಮಾತ್ರ ನಮಗೆ ಸಾಧ್ಯವಾಗಿದೆ. ಹಿಂದಿನ ಅನೇಕ ತಲೆಮಾರುಗಳ ಅನೇಕ ವ್ಯಕ್ತಿಗಳಿಗೆ ಅದೊಂದು ಜೀವನ ಕಲಿಕೆಯ ಆಕರವಾಗಿದ್ದುದಂತೂ ಹೌದು.  ಒಂದು ಸಂಗೀತ ಪುಸ್ತಕದಂತೆ ಆಧ್ಯಾತ್ಮವಿದ್ಯೆಯ ಪುಸ್ತಕವಾಗಿ ಅದು ಸಹಕರಿಸಬಲ್ಲದು ಎಂಬುದಾಗಿ ಸಂಪ್ರದಾಯಸ್ಥರು ಭಾವಿಸಿದ್ದಾರೆ.  ಸ್ವರ್ನವಲ್ಲಿ ಶ್ರೀಗಳು ಭಗವದ್ಗೀತೆಯ ಈ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ವಿಧ್ಯಾರ್ಥಿಗಳಿಗೆ ಆ ಗ್ರಂಥದ ಕುರಿತು ಆಸಕ್ತಿ ಮೂಡಿಸುವ ಆದರ್ಶವನ್ನಿಟ್ಟುಕೊಂಡಿದ್ದಾರೆ ಎಂಬುದು ಅವರ ಪ್ರಚಾರ ಟಿಪ್ಪಣಿಗಳನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯ ಧುರೀಣರು ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಬೇರೆಯದೇ ರಾಜಕೀಯ ಕಾರಣಗಳಿವೆ ಎಂಬುದು ಸ್ಪಷ್ಟ. ಆದರೆ ಪ್ರಜ್ಞಾವಂತರು ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಕೂಡ ಗಮನಿಸಬೇಕು. ಇಂಥ ಸ್ವಾಮಿಗಳೆಲ್ಲ  ಸತತ ಅಧ್ಯಯನಶೀಲರಾಗಿರುತ್ತಾರೆ.  ಅವರಿಗೂ  ನಮ್ಮಲ್ಲಿ ಅನೇಕರಂತೆ ಸಮಾಜದ ಕುರಿತು ಕಾಳಜಿಗಳಿವೆ ಹಾಗೂ ಸ್ವಂತ ನಿಲುವುಗಳಿವೆ.

ನಾವು ನಿಜವಾಗಿ ಜ್ಞಾನಾಸಕ್ತರೇ ಆಗಿದ್ದಲ್ಲಿ ಇಂಥ ಸಾಂಪ್ರದಾಯಿಕ ವಿದ್ವಾಂಸರ ಜೊತೆಗೆ ಹೇಗೆ ಸಂವಾದವನ್ನು ಏರ್ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಯೋಚಿಸಬೇಕಾದ ಅಗತ್ಯವಿದೆ. ಹಾಗೂ ಸೆಕ್ಯುಲರ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಮಗೆ ನಿಜವಾದ ಕಳಕಳಿ ಇದ್ದಿದ್ದೇ ಹೌದಾದರೆ ಸೆಕ್ಯುಲರಿಸಂನ  ಸ್ವರೂಪವನ್ನು ಮೊದಲು ತಿಳಿದುಕೊಳ್ಳೋಣ.

 

*********

bhagavad-gita.us

13 ಟಿಪ್ಪಣಿಗಳು Post a comment
  1. ಆಗಸ್ಟ್ 5 2011

    ಸನ್ಮಾನ್ಯರೇ, ಹಿಂದುಗಳಾದ ನಮಗೆ, ದೇಶಕ್ಕೆ ಸ್ವಾತಂತ್ರ್ಯ ಸಿಗುವ ತನಕ ಪರದೇಶಿಗಳ ದೌರ್ಜನ್ಯವಾಯಿತು. ಈಗ ನಮ್ಮವರೆ, ಅಂದರೆ ಹಿಂದುಗಳೆ ಧರ್ಮದ ವಿರುದ್ದವಾಗಿದ್ದಾರೆ. ಹೀಗಾದರೆ ನಾವು ಯಾರನ್ನು ದೂರಬೇಕು. ಯಾರನ್ನು ಕೇಳಬೇಕು. ಇತ್ತಿತ್ತಲಾಗಿ, ಅರಿವಿಲ್ಲದೆ ಹಿಂದುಗಳು, ಏನೋ ನೆಪ ಹೇಳಿ, ಹಣದಾಸೆಯಿಂದಲೋ, ಹೆಣ್ಣಿನ ಆಸೆಯಿಂದಲೋ ಹೊಟೆಲ್ ತಿಂಡಿಯಂತೆ, ಧರ್ಮ ಬದಲಾಯಿಸುತ್ತಿದ್ದಾರೆ. ಹಿಂದುಗಳೇ ಅಲ್ಪಸಂಖ್ಯಾತರಾಗುತ್ತಿದ್ದಾರೆ. ಇದನ್ನು ನೋಡಿಯಾದರೂ ಕಲಿಯಬಾರದೆ. ಪರ ದರ್ಮಿಯರು ಹಿಂದುಗಳಿಗೆ ಆಸೆ ಅಮಿಷಗಳನ್ನು ತೋರಿಸಿ, ಅದ್ದೂರಿಯಾಗಿ ಪ್ರಚಾರಮಾಡಿ, ತಮ್ಮ ಧರ್ಮದತ್ತ ಸೆಳೆಯುತ್ತಿದ್ದಾರೆ. ನಮ್ಮ ಧರ್ಮವನ್ನು ನಮ್ಮ ದೇಶದಲ್ಲಲದೆ ಮತ್ತಿನ್ಯಾವ ದೇಶದಲ್ಲಿ ಪ್ರಚಾರ ಮಾಡಬೇಕು. ಮಕ್ಕಳಿಗೆ ತಮ್ಮ ಧರ್ಮದ ಅರಿವಿಲ್ಲದೆ. ಹಾಳಾಗುತ್ತಿದ್ದಾರೆ. ನಿಮ್ಮ ಲೇಖನವನ್ನದರೂ ಓದಿ ಅವರ ಮನಸ್ಸು ಬದಲಾಗಲಿ. ಧರ್ಮದಲ್ಲಿ ರಾಜಕೀಯ ಬೆರೆತರೆ ಈ ರೀತಿ ಉದ್ದೇಶ ದಾರಿ ತಪ್ಪುತ್ತದೆ. ಏನಾದರೂ ಹಿಂದುಗಳು ಹೆಚ್ಚೆತ್ತುಕೊಳ್ಳಬೇಕು. ಅಲ್ಲವೆ?

    ಉತ್ತರ
  2. ವಿಜಯ ಪೈ
    ಆಗಸ್ಟ್ 7 2011

    ವಿವರಣಾತ್ಮಕ ಲೇಖನಕ್ಕೆ ಧನ್ಯವಾದಗಳು.

    ನನಗನಿಸುವಂತೆ ಕೆಲವು ಜನರಿಗೆ ಸ್ಥಿತಿ ಇದ್ದಂತೆ ಇರುವುದರಲ್ಲಿಯೇ ಹಿತವಿದೆ..ಅಂದರೆ ಅವರಿಗೆ ಬ್ರಾಹ್ಮಣ-ಶೂದ್ರದ ಕಂದಕ ಮುಚ್ಚುವುದು ಬೇಕಾಗಿಲ್ಲ. ಆ ನಿಟ್ಟಿನಲ್ಲಿ ಏನಾದರೂ ಪ್ರಯತ್ನ ನಡೆದರೆ ಕೂಡಲೇ ಇವರ ‘ಹೋರಾಟ’ ಪ್ರಾರಂಭವಾಗಿಬಿಡುತ್ತದೆ. ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತಹ ಪರಿಸ್ಥಿತಿ ಇವತ್ತು ಬ್ರಾಹ್ಮಣರದು. ಸಂಶೋಧಕರಾದ ಕಲಬುರ್ಗಿಯವರು ತಮ್ಮ ಉಳಿದೆಲ್ಲ ಕೆಲಸವನ್ನು ಬದಿಗಿಟ್ಟು ಬ್ರಾಹ್ಮಣರು ಯಡಿಯೂರಪ್ಪನವರ ಮೂಲಕ ವೈದಿಕ ಆಡಳಿತವನ್ನು ನಡೆಸುತ್ತಿದ್ದಾರೆ, ಆರ್ಯನ್ನರ ಪ್ರಭುತ್ವ ಎಂಬಿತ್ಯಾದಿ ಅಂಶಗಳುಳ್ಳ ಸಂಶೋಧನೆಯನ್ನು ಯಾವುದೋ ಸಮಾರಂಭದಲ್ಲಿ ಭಾಷಣ ರೂಪದಲ್ಲಿ ಹರಿಯಬಿಟ್ಟರೆ… ಮಾನ್ಯ ಟಿ,ಆರ್ ಚಂದ್ರಶೇಖರ ಅವರು ಮೊನ್ನೆಯಷ್ಟೇ ಇದನ್ನು ಅನುಮೋದಿಸಿ ಯಡಿಯೂರಪ್ಪನವರ ದುರಾಡಳಿತ ಮತ್ತು ಪತನಕ್ಕೆ ಕೂಡ ‘ವೈದಿಕ’ ಕಾರಣ ಕಂಡುಹಿಡಿದರು!.

    ಭಗವದ್ಗೀತೆಯದು ಕೂಡ ಅದೇ ಕಥೆ. ಅದಕ್ಕೊಂದು ಧರ್ಮ/ಪಂಗಡ ದ ಜೊತೆಗೆ ತಗಲಿ ಹಾಕುವ ಉತ್ಸಾಹ ಕೆಲವರಿಗೆ. ಏನನ್ನು ಕಲಿಸುತ್ತಾರೆ ಎನ್ನುವುದಕ್ಕಿಂತ ಯಾರು ಕಲಿಸುತ್ತಿದ್ದಾರೆ ಎನ್ನುವುದರ ಮೇಲೆ ‘ಹೋರಾಟ’ದ ನಿರ್ಧಾರ. ಮುಕ್ತವಾಗಿ ಕಲಿಸಲು ಹೋದರೆ ಕೇಸರಿಕರಣ/ವೈದಿಕ ಶಾಹಿಯ ಸ್ಥಾಪಿಸುವ ಹುನ್ನಾರ.. ಕಲಿಸದೇ ಮುಚ್ಚಿಟ್ಟರೆ, ಮನು ‘ಕಾದ ಸೀಸ ಹಾಕಬೇಕು’ ಎಂಬ ಕಥೆಯನ್ನು ಮತ್ತೆ ಮತ್ತೆ ಹೇಳಿ ಬಾಯಿ ಚಪಲವನ್ನು ತೀರಿಸಿಕೊಳ್ಳುವ ಹುನ್ನಾರ.

    ಉತ್ತರ
    • maaysa
      ಆಗಸ್ಟ್ 8 2011

      ಮಾನ್ಯ ವಿಜಯ ಪೈ ಅವರೇ..

      ಇದೆ ವಿಷಯವಾಗಿ ನಾನು ಹಾಗು ರಾಕೇಶ ಶೆಟ್ಟರು ಕೆಲದಿನಗಳ ಹಿಂದೆಯಿಲ್ಲಿ ಮಾತುಕತೆ ನಡೆಸಿದ್ದೆವು. ನಾನು ಈ ಬ್ರಾಹ್ಮಣರ ದಾನವೀಕರಣಕ್ಕೆ ಬೇಸತ್ತುಕೊಂಡಿದ್ದೆ.

      ಆದರೆ.. ತುಸು ಯೋಚಿಸಿರಿ. ಭಗವದ್ಗೀತೆಯನ್ನು ರಾಜಕೀಯಕ್ಕೆ ಬಳಸಿದ್ದು, ವೇದ-ವಿಶ್ವವಿದ್ಯಾನಿಲಯ, ಸಂಸ್ಕೃತ-ವಿಶ್ವವಿದ್ಯಾನಿಲಯ, ಗೋಕರ್ಣದ ವಿವಾದ, ಗೋ-ಸಂರಕ್ಷಣೆ, ಯಡಿಯೂರಪ್ಪರ ‘ಆಷಾಢ’ ಇವೆಲ್ಲ, ಒಂದು ಗುಂಪಿಗೆ ಬ್ರಾಹ್ಮಣರ ಲಾಬಿ ಎಂದು ಆನಿಸುವ ಹಾಗೆ ತಾರ್ಕಿಕವಾಗೆ ಮಾಡಿರಬಹುದಲ್ಲ.

      ಒಂದು ವಿಚಿತ್ರ ಅಂದರೆ. ಯಡಿಯೂರಪ್ಪನವರು ‘ವೈದಿಕತೆಯನ್ನು’ ಮರೆಸಿದರಂತೆ, ಹಾಗೆ ಅವರ ಪತನ ‘ವೈದಿಕರ ಸಂಚಂತೆ’ ಇದು ಒಂದು ಅರಗದ ಆಭಾಸ ನನಗೆ! ಆಗ ನಿಮ್ಮ “ನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬಂತಹ ಪರಿಸ್ಥಿತಿ ಇವತ್ತು ಬ್ರಾಹ್ಮಣರದು.” ಎಂಬುದು ಸಮಂಜಸವೆನಿಸುವುದು.

      ಹಿಂದೂ ಧರ್ಮದಲ್ಲಿ ಭಗವದ್ಗೀತೆ ದ್ವೈತವೋ, ಅದ್ವೈತವೋ ಎಂಬ ತಿಕ್ಕಾಟವಿದೆ. ಹಲ ಮತ ಹಾಗು ಸಿದ್ಧಾಂತಗಳ ಹಿಂದೂಧರ್ಮದಲ್ಲೇ ಭಗವದ್ಗೀತೆಯನ್ನು ನಿರಾಕರಿಸುವ ಪಂಗಡಗಳಿವೆ. ಭಗವದ್ಗೀತೆಯನ್ನು ಅದ್ವೈತಿಗಳು, ದ್ವೈತಿಗಳು, ಬೇರೆ ಬೇರೆ ರೀತ್ಯ ವ್ಯಾಖ್ಯಾನ ಮಾಡುತ್ತಾರೆ. ಇಷ್ಟು ದಿನ ನನ್ನ ಹಾಗೆ ಇರುವ ಸಾವಿರಾರು ‘ಸೆಕುಲರ್’ ಮಂದಿ ಭಗವದ್ಗೀತೆಯನ್ನು ಓದಿಕೊಂಡು, ಅದರಿಂದ ಕಲಿತಿದ್ದೀವಿ. ಆದರೆ, ನಮಗೆ ನೋವು ತಂದಿದ್ದ್ದು, ಆ ಭಗವದ್ಗೀತೆಯನ್ನು ಬಳಸಿ “ಈ ಈ ‘ಭಾರತೀಯ’ ಜನರು ಭಾರತೀಯ ಪ್ರಜತ್ವಕ್ಕೆ ಲಾಯಕ್ಕಲ್ಲ” ಎಂದಿದ್ದು. ಇದು ತಪ್ಪು ತಾನೆ?

      ನೋಡಿ.. ವಿವೇಕಾನಂದರು ಜಗತ್-ಪ್ರಶಂಸೆಗಳಿಸಿದ್ದೂ ನಮ್ಮ ಹಿಂದೂ ಅಧ್ಯಾತ್ಮವನ್ನೂ ವಿಶಾಲಗೊಳಿಸಿ, ಜಗತ್ತೊಂದು ಕುಟುಂಬವೆಂದು, ಹಾಗು ಕೆಲವರು ಜಗದ್ದೂಷಣೆಗೆ ಕಾರಣವಾಗಿದ್ದು ನಮ್ಮ ಆಧ್ಯಾತ್ಮವನ್ನು ಸಂಕುಚಿತಗೊಳಿಸಿ, ರಾಜಕೀಯಕ್ಕೆ ಬಳಸಿಕೊಂಡು.

      ಉತ್ತರ
      • ವಿಜಯ ಪೈ
        ಆಗಸ್ಟ್ 8 2011

        ಮಾಯ್ಸ್..
        ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವ ವಿಚಾರ ವೈಯುಕ್ತಿಕವಾಗಿ ನನಗೆ ಒಪ್ಪಿತವಲ್ಲ. ಹಲವು ಮತಗಳ/ನಂಬಿಕೆಗಳ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವುದರಿಂದ ಮತ್ತು ಭಗವದ್ಗೀತೆ ಹಿಂದುಗಳ ‘ಧರ್ಮಗ್ರಂಥ’ ಎಂಬುದಕ್ಕೆ ಬಹು ಜನರ ತಿಳಿವಳಿಕೆ ಸೀಮಿತಗೊಂಡಿರುವುದರಿಂದ.. ಈ ಕಲಿಸುವಿಕೆಯ ಕಾರ್ಯ ಎಷ್ಟೇ ಉದಾತ್ತವಾದರೂ ಸಂದೇಹಗಳಿಂದ ಮುಕ್ತವಾಗುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಅಸಾಧ್ಯ. ಆದ್ದರಿಂದ ಕಲಿಸಬೇಕೆಂಬ ಇಚ್ಛೆಯುಳ್ಳವರು ಕಲಿಯುವ ಆಸಕ್ತಿಯುಳ್ಳವರನ್ನು ಶಾಲೆಯ ಆವರಣದಿಂದ ಹೊರಗೆ..ಸಮುದಾಯ ಭವನದಲ್ಲೊ ಅಥವಾ ಇನ್ನೆಲ್ಲೊ ಶಿಬಿರ ಏರ್ಪಡಿಸಿ ಕಲಿಸುವುದು ಲೇಸು ಎಂದು ನನಗನಿಸುತ್ತದೆ.

        >>ಭಗವದ್ಗೀತೆಯನ್ನು ರಾಜಕೀಯಕ್ಕೆ ಬಳಸಿದ್ದು, ವೇದ-ವಿಶ್ವವಿದ್ಯಾನಿಲಯ, ಸಂಸ್ಕೃತ-ವಿಶ್ವವಿದ್ಯಾನಿಲಯ,.<>ಗೋಕರ್ಣದ ವಿವಾದ, ಗೋ-ಸಂರಕ್ಷಣೆ<>ಆ ಭಗವದ್ಗೀತೆಯನ್ನು ಬಳಸಿ “ಈ ಈ ‘ಭಾರತೀಯ’ ಜನರು ಭಾರತೀಯ ಪ್ರಜತ್ವಕ್ಕೆ ಲಾಯಕ್ಕಲ್ಲ” ಎಂದಿದ್ದು. ಇದು ತಪ್ಪು ತಾನೆ?<<
        ಇಲ್ಲಿ ಶಿಕ್ಷಣ ಸಚಿವರ ಹೇಳಿಕೆ ತಿರುಚಲಾಗಿದೆ ಎನಿಸುತ್ತದೆ ನನಗೆ. ಈ ಲೇಖನ ಓದಿ ನೋಡಿ.

        ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

        ಉತ್ತರ
      • ವಿಜಯ ಪೈ
        ಆಗಸ್ಟ್ 8 2011

        ಮಾಯ್ಸ್..
        ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವ ವಿಚಾರ ವೈಯುಕ್ತಿಕವಾಗಿ ನನಗೆ ಒಪ್ಪಿತವಲ್ಲ. ಹಲವು ಮತಗಳ/ನಂಬಿಕೆಗಳ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವುದರಿಂದ ಮತ್ತು ಭಗವದ್ಗೀತೆ ಹಿಂದುಗಳ ‘ಧರ್ಮಗ್ರಂಥ’ ಎಂಬುದಕ್ಕೆ ಬಹು ಜನರ ತಿಳಿವಳಿಕೆ ಸೀಮಿತಗೊಂಡಿರುವುದರಿಂದ.. ಈ ಕಲಿಸುವಿಕೆಯ ಕಾರ್ಯ ಎಷ್ಟೇ ಉದಾತ್ತವಾದರೂ ಸಂದೇಹಗಳಿಂದ ಮುಕ್ತವಾಗುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಅಸಾಧ್ಯ. ಆದ್ದರಿಂದ ಕಲಿಸಬೇಕೆಂಬ ಇಚ್ಛೆಯುಳ್ಳವರು ಕಲಿಯುವ ಆಸಕ್ತಿಯುಳ್ಳವರನ್ನು ಶಾಲೆಯ ಆವರಣದಿಂದ ಹೊರಗೆ..ಸಮುದಾಯ ಭವನದಲ್ಲೊ ಅಥವಾ ಇನ್ನೆಲ್ಲೊ ಶಿಬಿರ ಏರ್ಪಡಿಸಿ ಕಲಿಸುವುದು ಲೇಸು ಎಂದು ನನಗನಿಸುತ್ತದೆ.

        >>ಭಗವದ್ಗೀತೆಯನ್ನು ರಾಜಕೀಯಕ್ಕೆ ಬಳಸಿದ್ದು, ವೇದ-ವಿಶ್ವವಿದ್ಯಾನಿಲಯ, ಸಂಸ್ಕೃತ-ವಿಶ್ವವಿದ್ಯಾನಿಲಯ,.<>ಗೋಕರ್ಣದ ವಿವಾದ, ಗೋ-ಸಂರಕ್ಷಣೆ<>ಆ ಭಗವದ್ಗೀತೆಯನ್ನು ಬಳಸಿ “ಈ ಈ ‘ಭಾರತೀಯ’ ಜನರು ಭಾರತೀಯ ಪ್ರಜತ್ವಕ್ಕೆ ಲಾಯಕ್ಕಲ್ಲ” ಎಂದಿದ್ದು. ಇದು ತಪ್ಪು ತಾನೆ?<<
        ಇಲ್ಲಿ ಶಿಕ್ಷಣ ಸಚಿವರ ಹೇಳಿಕೆ ತಿರುಚಲಾಗಿದೆ ಎನಿಸುತ್ತದೆ ನನಗೆ. ಈ ಲೇಖನ ಓದಿ ನೋಡಿ.

        ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

        (ಮೇಲಿನ ಪ್ರತಿಕ್ರಿಯೆ ಬದಲಿಗೆ ಇದನ್ನು ಓದಿ)

        ಉತ್ತರ
      • ವಿಜಯ ಪೈ
        ಆಗಸ್ಟ್ 8 2011

        (ಪ್ರತಿಕ್ರಿಯೆಗಳೇಕೊ ಸರಿಯಾಗಿ ಮೂಡಿಬರುತ್ತಿಲ್ಲ. ಅದಕ್ಕೆ ಎರಡು ಪಾರ್ಟ ಮಾಡಿ ಹಾಕಿದ್ದೇನೆ)
        ಮಾಯ್ಸ್..
        ಭಗವದ್ಗೀತೆಯನ್ನು ಶಾಲೆಗಳಲ್ಲಿ ಕಲಿಸುವ ವಿಚಾರ ವೈಯುಕ್ತಿಕವಾಗಿ ನನಗೆ ಒಪ್ಪಿತವಲ್ಲ. ಹಲವು ಮತಗಳ/ನಂಬಿಕೆಗಳ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಶಾಲೆಯಲ್ಲಿ ಇರುವುದರಿಂದ ಮತ್ತು ಭಗವದ್ಗೀತೆ ಹಿಂದುಗಳ ‘ಧರ್ಮಗ್ರಂಥ’ ಎಂಬುದಕ್ಕೆ ಬಹು ಜನರ ತಿಳಿವಳಿಕೆ ಸೀಮಿತಗೊಂಡಿರುವುದರಿಂದ.. ಈ ಕಲಿಸುವಿಕೆಯ ಕಾರ್ಯ ಎಷ್ಟೇ ಉದಾತ್ತವಾದರೂ ಸಂದೇಹಗಳಿಂದ ಮುಕ್ತವಾಗುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಅಸಾಧ್ಯ. ಆದ್ದರಿಂದ ಕಲಿಸಬೇಕೆಂಬ ಇಚ್ಛೆಯುಳ್ಳವರು ಕಲಿಯುವ ಆಸಕ್ತಿಯುಳ್ಳವರನ್ನು ಶಾಲೆಯ ಆವರಣದಿಂದ ಹೊರಗೆ..ಸಮುದಾಯ ಭವನದಲ್ಲೊ ಅಥವಾ ಇನ್ನೆಲ್ಲೊ ಶಿಬಿರ ಏರ್ಪಡಿಸಿ ಕಲಿಸುವುದು ಲೇಸು ಎಂದು ನನಗನಿಸುತ್ತದೆ.

        >>ಭಗವದ್ಗೀತೆಯನ್ನು ರಾಜಕೀಯಕ್ಕೆ ಬಳಸಿದ್ದು, ವೇದ-ವಿಶ್ವವಿದ್ಯಾನಿಲಯ, ಸಂಸ್ಕೃತ-ವಿಶ್ವವಿದ್ಯಾನಿಲಯ,.<<
        ಈ ವಿಷಯಕ್ಕೊಂದು ವಿಶ್ವವಿದ್ಯಾಲಯ ಮಾಡುವ ಹುಚ್ಚು, ಅವೈಜ್ಞಾನಿಕ ನಿರ್ಧಾರಗಳು ಸರಕಾರ ನಡೆಸುವವವರಿಗೆ ಏಕೆ ಬರುತ್ತದೊ ಗೊತ್ತಿಲ್ಲ. ಮೊನ್ನೆ ಮೊನ್ನೆ ಶಿಗ್ಗಾಂವ ಹತ್ತಿರ ಜಾನಪದ ವಿ.ವಿ ಬೇರೆ ಮಾಡಿದ್ದಾರೆ!. ಯಾವುದೋ ವಿಶ್ವ ವಿದ್ಯಾಲಯದಲ್ಲಿ ಒಂದು ವಿಭಾಗವಾಗಿರಬೇಕಾದದ್ದನ್ನು ಬೇರ್ಪಡಿಸಿ ಪ್ರತ್ಯೇಕ ವಿ.ವಿ ಎಂದು ಮಾಡಲು ಸುರು ಮಾಡಿದರೆ..ಈ 'ವಿಶ್ವ ವಿದ್ಯಾಲಯ' ಎಂಬ ಶಬ್ದದ ಅರ್ಥ ನಮ್ಮ ಸರ್ಕಾರದ ಪ್ರಕಾರ ಏನು ಎಂಬುದನ್ನು ತಿಳಿದುಕೊಳ್ಳಬೇಕು.

        ಉತ್ತರ
        • ವಿಜಯ ಪೈ
          ಆಗಸ್ಟ್ 8 2011

          >>ಗೋಕರ್ಣದ ವಿವಾದ, ಗೋ-ಸಂರಕ್ಷಣೆ<>ಆ ಭಗವದ್ಗೀತೆಯನ್ನು ಬಳಸಿ “ಈ ಈ ‘ಭಾರತೀಯ’ ಜನರು ಭಾರತೀಯ ಪ್ರಜತ್ವಕ್ಕೆ ಲಾಯಕ್ಕಲ್ಲ” ಎಂದಿದ್ದು. ಇದು ತಪ್ಪು ತಾನೆ?<<
          ಇಲ್ಲಿ ಶಿಕ್ಷಣ ಸಚಿವರ ಹೇಳಿಕೆ ತಿರುಚಲಾಗಿದೆ ಎನಿಸುತ್ತದೆ ನನಗೆ. ಈ ಲೇಖನ ಓದಿ ನೋಡಿ.

          ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

          ಉತ್ತರ
          • maaysa
            ಆಗಸ್ಟ್ 9 2011

            ಇದನ್ನೇ ನಮ್ಮ ಕೆಲ ಸಚಿವರೂ ಮಾಡಹೊರಟಿರುವುದು.!

            ಉತ್ತರ
      • ವಿಜಯ ಪೈ
        ಆಗಸ್ಟ್ 8 2011

        >>ಗೋಕರ್ಣದ ವಿವಾದ, ಗೋ-ಸಂರಕ್ಷಣೆ<>ಆ ಭಗವದ್ಗೀತೆಯನ್ನು ಬಳಸಿ “ಈ ಈ ‘ಭಾರತೀಯ’ ಜನರು ಭಾರತೀಯ ಪ್ರಜತ್ವಕ್ಕೆ ಲಾಯಕ್ಕಲ್ಲ” ಎಂದಿದ್ದು. ಇದು ತಪ್ಪು ತಾನೆ?<<
        ಇಲ್ಲಿ ಶಿಕ್ಷಣ ಸಚಿವರ ಹೇಳಿಕೆ ತಿರುಚಲಾಗಿದೆ ಎನಿಸುತ್ತದೆ ನನಗೆ. ಈ ಲೇಖನ ಓದಿ ನೋಡಿ.

        ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

        (ನಿರ್ವಾಹಕರಲ್ಲಿ ವಿನಂತಿ.. ದಯವಿಟ್ಟು ರಿಪೀಟಾದ ಪ್ರತಿಕ್ರಿಯೆಗಳನ್ನು ತೆಗೆದುಹಾಕಿ)

        ಉತ್ತರ
      • ವಿಜಯ ಪೈ
        ಆಗಸ್ಟ್ 8 2011

        >>ಗೋಕರ್ಣದ ವಿವಾದ, ಗೋ-ಸಂರಕ್ಷಣೆ<<
        ಈ ಕಲಬುರ್ಗಿ, ಚಂದ್ರಶೇಕರ ಅಂತವರ 'ಸಂಶೋಧನೆ' ಗಳಿಗೆ ಪುಷ್ಟಿ ಕೊಡುವಂತಹ ಘಟನೆಗಳು ಕೂಡ ನಡೆಯುತ್ತವೆ..ಸುಮಾರು ಎರಡು ತಿಂಗಳ ಹಿಂದೆ ಇರಬಹುದು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳು ಯಡಿಯೂರಪ್ಪನವರ ಸರ್ಕಾರ ಸಂಕಷ್ಟಗಳೆಷ್ಟೇ ಬಂದರೂ ಬಚಾವಾಗಿ ಉಳಿದಿದ್ದು ಅವರು ಮಠ-ಮಾನ್ಯಗಳಿಗೆ ಧಾರಾಳವಾಗಿ ದಾನ ಮಾಡಿದ್ದರಿಂದ ಮತ್ತು ಗೋ-ಸಂರಕ್ಷಣೆಗೆ ಹಣ ಕೊಟ್ಟಿದ್ದರಿಂದ ಎಂದು ಪ್ರವಚನವೊಂದರಲ್ಲಿ ಹೇಳಿ, ನೆರದವರಿಗೆ 'ಸುಲಭ ಸಂಕಷ್ಟ ಹರಣ' ಸೂತ್ರವೊಂದನ್ನು ತಿಳಿಸಿಕೊಟ್ಟರು..ಕೇಳಿದ ಭಕ್ತರು ಹಾರಿ ಬಿಳುವುದೊಂದು ಬಾಕಿ!!.
        ಇದು ಆಡಿಕೊಳ್ಳುವವರ ಎದುರಿಗೆ ಎಡವಿ ಬಿದ್ದರು ಎಂಬಂತಲ್ಲವೆ?

        ಉತ್ತರ
  3. ರವಿಕುಮಾರ ಜಿ ಬಿ
    ಆಗಸ್ಟ್ 8 2011

    ಬಹಳ ಚೆನ್ನಾಗಿ ಬರೆದಿದ್ದೀರಿ ,ಧನ್ಯವಾದಗಳು,

    ಇನ್ನು ಕೆಲವರಿಗೆ ತಾವು ಹಿಂದುಳಿದವರು ಮತ್ತು ತುಳಿಸಿ ಕೊ೦ಡವರು ಅಂತ ಹೇಳಿಕೊಳ್ಳುವುದರಲ್ಲಿ ಅದೇನೋ ಆನಂದ (ಮನೋ-ವಿಕೃತಿ?). ಒಮ್ಮೆ ತುಳಿತಕ್ಕೊಳಗಾದರೆ ಮತ್ತೋ0ಮ್ಮೆ ಹಾಗಾಗದಂತೆ ಎಚ್ಚರವಹಿಸೋದು maanava ಸಹಜಗುಣ ,ಆದರೆ ನಾವು ತುಳಿತಕ್ಕೊಳಗಗಿದ್ದೇವೆ ಎಂದು ಹೇಳಿಕೊಂಡು ತಿರುಗುವುದು ಸರಿಯಲ್ಲ ಅನ್ನಿಸತ್ತೆ. (ಎಲ್ಲರೂ ಹಾಗಿಲ್ಲ ).
    ಮತ್ತೆ ಭಗವದ್ಗೀತೆ ಬಗ್ಗೆ ಹೇಳಿ ತಮ್ಮ ಅಜ್ಞಾನ ಪ್ರದರ್ಶಿಸುವವರಿಗೆನೂ ಕಡಿಮೆಯಿಲ್ಲ!!!
    ಒಬ್ಬ ಮಹಾನುಭಾವ ಇನ್ನೂ ಮುಂದೆ ಹೋಗಿ “ಕರ್ಮ ಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ” ಎಂದು ಗೀತೆಯಲ್ಲಿ ಹೇಳಿದೆ ಹಾಗಾಗಿ ಅದು ದಲಿತ ವಿರೋಧಿ ಅಂತ ಫರ್ಮಾನು ಹೊರಡಿಸಿಯೇ ಬಿಟ್ಟ ಆ ಮೂರ್ಖ ಲೇಖಕ, ಪತ್ರಿಕೆಯೊಂದು ಹಿಂದೂ ಮುಂದು ನೋಡದೆ ಪ್ರಕಟಿಸಿಯೇ ಬಿಟ್ಟಿತು !!!!! ಹಿಂದೂಗಳು ಸಹನಶೀಲರಾಗಿ ಓದಿ ಕಸದಬುಟ್ಟೀಗೆ ಎಸೆದರು ಅದನ್ನು .!
    ಏನಾದರೂ ಹಿಂದೂಗಳು ಎಚ್ಚೆತ್ತು ಕೊಳ್ಳಬೇಕಾದ ಅನಿವಾರ್ಯತೆ ಖಂಡಿತಾ ಇದೆ.!!

    ಉತ್ತರ
  4. ಆಗಸ್ಟ್ 9 2011

    ಭಗವದ್ಗೀತೆಯ ಕುರಿತ ನಾನು ಕಂಡ ಅತ್ಯಂತ ಸುಂದರ ನಿರೂಪಣೆ. ಬಹಳ ಚೆನ್ನಾಗಿ ಬರೆದಿದ್ದೀರಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments